ಓಶೋ ಕುರಿತ ಈ ಬ್ಲಾಗಿಗೆ ಸುಪ್ರೀತ ‘ಓಶೋ ಎಂಬ ಹಕ್ಕಿ’ ಎಂದ್ಯಾಕೆ ಶೀರ್ಷಿಕೆ ಕೊಟ್ಟ?
ಹಾಗಂತ ನಾನವನನ್ನ ಕೇಳಲಿಲ್ಲ. ಆದರೆ ನನಗೆ ಆ ಹೆಸರು ಸಮಂಜಸ ಅನಿಸಿದ್ದು ಹೌದು.
ಹಕ್ಕಿ ಅಂದರೆ ಹಗುರ.
ಹಕ್ಕಿ ಅಂದರೆ ಸ್ವತಂತ್ರ.
ಹಕ್ಕಿ ಅಂದರೆ ಸ್ವಚ್ಚಂದ.
ಹಾಗೇ,
ಓಶೋ ವಿಚಾಗಳ ನಿರೂಪಣೆ ಅತ್ಯಂತ ಹಗುರ. ಅಲ್ಲೇನೂ ನಿಮಗೆ ಮುಖ ಗಂಟಿಕ್ಕಿದ ಭಾರ ಭಾರದ ಪದಪುಂಜಗಳು ನಿಮ್ಮನ್ನ ಕಾಡಿಸಲಾರವು. ಅವರ ಮಾತಿನ ಶೈಲಿ ನಿಮ್ಮ ತಲೆಗೆ ಯಾವತ್ತೂ ಹೊರೆ ಅನಿಸದು.
ಓಶೋ ವಿಚಾರಗಳು ಮುಕ್ತ. ಅಲ್ಲಿ ಮಡಿವಂತಿಕೆಯಿಲ್ಲ. ನೀವು ಯಾವುದೇ ಪ್ರಶ್ನೆ ಕೇಳಿಯೂ ಅಲ್ಲಿಂದ ಉತ್ತರ ಪಡೆಯಬಹುದು. ಈ ಕಾರಣಕ್ಕೇ ಕೆಲವೊಮ್ಮೆ ಅಲ್ಲಿ ವಿರೋಧಾಬಾಸಗಳು ತೋರುತ್ತವೆಯೆಂಬುದೂ ನಿಜ.
ಓಶೋ ಚಿಂತನೆಗಳು ಎಲ್ಲರನ್ನೂ ಎಲ್ಲವನ್ನೂ ಒಳಗೊಂಡಿದ್ದೂ ಸ್ವತಂತ್ರ. ಬುದ್ಧ ಹೇಳಿದ, ಮಹಾವೀರ ಹೇಳಿದ, ತ್ಸಾವೋ ಹೇಳಿದ, ಝೆನ್ ಪರಂಪರೆ ಹೇಳಿದ್ದನ್ನೇ ಹೇಳಿದರೂ ಓಶೋ ಮೂಲಕ ಅವು ಬಂದಾಗ ತಾಜಾ ಎನಿಸುವುದು ಈ ಕಾರಣಕ್ಕೇ.
ಓಶೋ ಬಗ್ಗೆ ಸಾಕಷ್ಟು ದೂರುಗಳಿವೆ. ತಕರಾರುಗಳೂ ಆರೋಪಗಳೂ ಇವೆ. ಅಷ್ಟೆಲ್ಲದರ ನಡುವೆಯೂ ಓಶೋ ಭಿನ್ನವಾಗಿ ನಿಲ್ಲುತ್ತಾರೆಂದರೆ ಅದಕ್ಕೆ ಕಾರಣ ಅವರ ಸರ್ವ ಧರ್ಮ ಸಮನ್ವಯ ಭಾವ.
ನನಗೆ ಓಶೋ ಇಷ್ಟವಾಗೋದು ಭಾರತದೆಡೆಗಿನ ಉತ್ಕಟ ಪ್ರೀತಿಯಿಂದಾಗಿ. ಅವರ ನೇರವಂತಿಕೆ, ನಿರ್ಭಿಡೆಯ ನಡೆ- ನುಡಿಗಳು ನನ್ನನ್ನು, ಎಂಥವರನ್ನೂ ತಟ್ಟುತ್ತವೆ.
ಅಂತೂ ನಮ್ಮ ಓಶೋ ಬ್ಲಾಗು ವರ್ಡ್ ಪ್ರೆಸ್ಸಿನಲ್ಲಿ ಶುರುವಾಗಿದೆ. ಆದರೆ ಇದರ ಸ್ವರೂಪ ಹೇಗಿರಬೇಕು? ಚರ್ಚೆ ಹೇಗೆಲ್ಲ ಸಾಗಬೇಕು ಅನ್ನುವುದೆಲ್ಲ ಇನ್ನಷ್ಟೆ ನಿರ್ಧಾರವಾಗಬೇಕಿದೆ. ಇದಕ್ಕೆ ಅತಿ ಮುಖ್ಯವಾಗಿ ಬೇಕಾಗೋದು ನಿಮ್ಮೆಲ್ಲರ ಸಹಕಾರ. ಓಶೋ ಕುರಿತ ಸಂವಾದದಲ್ಲಿ ನೀವೂ ಭಾಗಿಗಳಾಗಿ. ನಿಮ್ಮ ಸಮ್ಮತಿ, ಅಸಮ್ಮತಿಗಳನ್ನು ನೇರವಾಗಿ ಹಂಚಿಕೊಳ್ಳಿ.
ನಾವು ಕಾದಿದ್ದೇವೆ.
ಚೇತನಾ



June 7, 2008 at 10:58 am
ನೀವು ಎಷ್ಟೆಲ್ಲಾ ಬರೀತೀರಾ…!!
ನಿಮ್ಮ ಕರ್ತೃತ್ವ ಶಕ್ತಿಗೆ…ಕ್ರಿಯಾಶೀಲತೆಗೆ ನಂದೊಂದು ಸಲಾಮ್….
ನೀವು ಹೀಗೆ ಬರೀತಾ ಇರಿ…ನಾವೆಲ್ಲಾ ಒದಿ ಖುಶಿ ಪಡ್ತಾ ಇರ್ತಿವಿ…ನಿಮ್ಮ ಬರವಣಿಗೆಯ ಉತ್ಸಾಹ ನಿರಂತರವಾಗಿರಲಿ….
ಓಶೋ ಬಗ್ಗೆ ಇನ್ನಷ್ಠು ಬರಹಗಳ ಕಾಯುತ್ತಾ…
ವಿಜಯ್ ರಾಜ್ ಕೆ